Wednesday, 30 September 2026

ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ… ತಪ್ಪು ಮಗುವಿನಲ್ಲೇ ಇದೆಯೇ?

“ಎಷ್ಟು ಸಲ ಓದಿದರೂ ಸ್ವಲ್ಪ ಹೊತ್ತಿನ ನಂತರ ಮರೆತು ಹೋಗುತ್ತಾನೆ…”
“ಪಾಠವನ್ನು ಕೇಳಿದರೆ ಹೇಳುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ಅದೇ ಪ್ರಶ್ನೆ ಕೇಳಿದರೆ ಉತ್ತರಿಸಲು ಕಷ್ಟಪಡುತ್ತಾನೆ…”
“ಓದಲು ಕುಳಿತಾಗ ಸಣ್ಣ ಶಬ್ದವಾದರೂ ಗಮನ ಅಲ್ಲಿಗೆ ಹೋಗುತ್ತದೆ. ಮತ್ತೆ ಪುಸ್ತಕದ ಕಡೆಗೆ ಬರಲು ಸಮಯ ಬೇಕಾಗುತ್ತದೆ…”
- ಮಕ್ಕಳ ಓದಿನ ಬಗ್ಗೆ ಮಾತನಾಡುವಾಗ ಕೆಲವು ಪೋಷಕರಿಂದ ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತೇವೆ.

ಇತ್ತೀಚೆಗೆ ನಮ್ಮಲ್ಲಿ ಬಂದಿದ್ದ ಒಂದು ಮಗುವಿನ ಸಮಸ್ಯೆಯೂ ಇದೇ ರೀತಿಯದ್ದಾಗಿತ್ತು. ವಿಶೇಷವಾಗಿ ಸಮಾಜ ವಿಜ್ಞಾನದಂತಹ ವಿಷಯಗಳನ್ನು ಓದುವಾಗ ಹೆಚ್ಚು ಕಷ್ಟವಾಗುತ್ತಿತ್ತು. ಪಾಠವನ್ನು ಅರ್ಥಮಾಡಿಕೊಂಡು ತನ್ನದೇ ಮಾತಿನಲ್ಲಿ ಹೇಳಿಕೊಳ್ಳುವುದಕ್ಕಿಂತ, ಪುಸ್ತಕದಲ್ಲಿರುವುದನ್ನು ಹಾಗೆಯೇ ಕಂಠಪಾಠ ಮಾಡುವ ಅಭ್ಯಾಸ ಹೆಚ್ಚಾಗಿತ್ತು. ಓದಲು ಕುಳಿತಾಗ ಸುತ್ತಮುತ್ತಲಿನ ಶಬ್ದಗಳಿಂದ ಬೇಗ ಗಮನ ಬೇರೆಡೆಗೆ ಹರಿಯುತ್ತಿತ್ತು. ಮಧ್ಯದಲ್ಲಿ ಯಾರಾದರೂ ಮಾತನಾಡಿಸಿದರೆ ಅಥವಾ ಬೇರೆ ಕಾರಣದಿಂದ ಓದಿಗೆ     ಅಡ್ಡಿಯಾದರೆ, ಮತ್ತೆ ಹಿಂದಿನ ವಿಷಯದೊಂದಿಗೆ ಸಂಪರ್ಕ ಸಾಧಿಸಿ ಓದನ್ನು ಮುಂದುವರಿಸುವುದು ಕಷ್ಟವಾಗುತ್ತಿತ್ತು.

ಮೊದಲ ನೋಟಕ್ಕೆ ಇದನ್ನು ಕಂಡಾಗ “ಓದಿನಲ್ಲಿ ಆಸಕ್ತಿ ಕಡಿಮೆ”, “ಏಕಾಗ್ರತೆ ಇಲ್ಲ”, “ಓದಿದ್ದು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ” ಎಂದು ಹೇಳುವುದು ಸುಲಭ. ಆದರೆ ಮಗುವಿನೊಂದಿಗೆ ಸ್ವಲ್ಪ ಸಮಯ ಮಾತನಾಡಿ, ಅದರ ಬರವಣಿಗೆ, ಚಿತ್ರಕಲೆ, ಕಲಿಕೆಯ ರೀತಿ ಮತ್ತು ಪ್ರತಿಕ್ರಿಯೆಯನ್ನು ಗಮನಿಸಿದಾಗ ಬೇರೆಯದೇ ಚಿತ್ರ ಕಾಣಿಸಿತು. ಮಗು ಶಾಂತ ಸ್ವಭಾವದ್ದಾಗಿತ್ತು. ಹೇಳಿದ್ದನ್ನು ಗಮನವಿಟ್ಟು ಕೇಳುವ ಮತ್ತು ಮಾರ್ಗದರ್ಶನವನ್ನು ಸ್ವೀಕರಿಸುವ ಗುಣವೂ ಇತ್ತು. ವಿಷಯಗಳನ್ನು ಸರಳವಾಗಿ, ಕ್ರಮಬದ್ಧವಾಗಿ, ಚಿತ್ರಗಳ ಮೂಲಕ ಅಥವಾ ದಿನನಿತ್ಯದ ಉದಾಹರಣೆಗಳೊಂದಿಗೆ ವಿವರಿಸಿದಾಗ ಚೆನ್ನಾಗಿ ಸ್ಪಂದಿಸುತ್ತಿತ್ತು.

ಅಂದರೆ ಕಲಿಯುವ ಸಾಮರ್ಥ್ಯದ ಕೊರತೆ ಇರಲಿಲ್ಲ; ಕಲಿಯಲು ಬಳಸುತ್ತಿದ್ದ ವಿಧಾನವೇ ಆ ಮಗುವಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿರಲಿಲ್ಲ.

ಮಗುವಿನ ಕಲಿಕೆಯ ವಿಧಾನವನ್ನು ಗಮನಿಸಿದಾಗ, ಅದು ಕಂಠಪಾಠದ ಮೇಲೆ ಹೆಚ್ಚು ಅವಲಂಬಿತವಾಗಿದ್ದರೂ, ಚಿತ್ರಗಳು, ದೃಶ್ಯಗಳು ಹಾಗೂ ಸರಳ ಪ್ರಾಯೋಗಿಕ ಉದಾಹರಣೆಗಳ ಮೂಲಕ ವಿವರಿಸಿದಾಗ ವಿಷಯವನ್ನು ಹೆಚ್ಚು ಚೆನ್ನಾಗಿ ಗ್ರಹಿಸುವುದು ಕಂಡುಬಂತು

ಹಾಗಾದರೆ ಸಮಸ್ಯೆ ಎಲ್ಲಿತ್ತು?

ಒಂದು ವಿಷಯವನ್ನು ಹತ್ತು ಬಾರಿ ಓದುವುದು ಮತ್ತು ಅದನ್ನು ಅರ್ಥಮಾಡಿಕೊಂಡು ಕಲಿಯುವುದು ಒಂದೇ ಅಲ್ಲ.

ಉದಾಹರಣೆಗೆ, ಇತಿಹಾಸದ ಒಂದು ಪಾಠವನ್ನು ಸಾಲುಸಾಲಾಗಿ ಕಂಠಪಾಠ ಮಾಡುವ ಬದಲು ಘಟನೆಗಳನ್ನು “ಮೊದಲು ಏನಾಯಿತು? ನಂತರ ಏನಾಯಿತು? ಅದಕ್ಕೆ ಕಾರಣವೇನು? ಅದರ ಪರಿಣಾಮವೇನು?” ಎಂದು ಒಂದಕ್ಕೊಂದು ಜೋಡಿಸಿ ಕಥೆಯಂತೆ ಅರ್ಥಮಾಡಿಕೊಂಡರೆ ನೆನಪಿನಲ್ಲಿ ಉಳಿಸಿಕೊಳ್ಳುವುದು ಸುಲಭವಾಗಬಹುದು.

ಭೂಗೋಳದ ವಿಷಯವಾದರೆ ನಕ್ಷೆ, ಚಿತ್ರ ಅಥವಾ ಸರಳ ಕೋಷ್ಟಕಗಳ ಸಹಾಯ ಪಡೆಯಬಹುದು. ದೊಡ್ಡ ಉತ್ತರವನ್ನು ಒಂದೇ ಸಲ ಕಂಠಪಾಠ ಮಾಡುವ ಬದಲು, ಅದರಲ್ಲಿರುವ ಮುಖ್ಯ ಪದಗಳನ್ನು ಗುರುತಿಸಿ, ಅವುಗಳ ಆಧಾರದಲ್ಲಿ ತನ್ನದೇ ಮಾತಿನಲ್ಲಿ ಉತ್ತರವನ್ನು ಕಟ್ಟುವ ಅಭ್ಯಾಸ ಮಾಡಿಸಬಹುದು.

ಈ ಮಗುವಿನ ವಿಷಯದಲ್ಲಿ ಇನ್ನೊಂದು ಮುಖ್ಯ ಅಂಶವೂ ಕಂಡುಬಂದಿತ್ತು — ಓದಿನ ನಿರಂತರತೆ.

ಓದಲು ಕುಳಿತ ನಂತರ ಸುತ್ತಮುತ್ತಲಿನ ಶಬ್ದದಿಂದ ಗಮನ ಬೇರೆಡೆ ಹೋದಾಗ ಕಲಿಕೆಯ ಸರಪಳಿ ತುಂಡಾಗುತ್ತಿತ್ತು. ಜೊತೆಗೆ ಯಾರಾದರೂ ಹೇಳಿದ ನಂತರವೇ ಓದಲು ಕುಳಿತುಕೊಳ್ಳುವುದಕ್ಕಿಂತ, ಸ್ವತಃ ಓದಲು ಆರಂಭಿಸುವ ಅಭ್ಯಾಸ ಹಾಗೂ ಕ್ರಮಬದ್ಧ ಪುನರಾವರ್ತನೆಯನ್ನೂ ಬೆಳೆಸಬೇಕಾಗಿತ್ತು. ಮಗುವಿನ ಗಮನ ಕೇಂದ್ರೀಕರಿಸುವಿಕೆ ಮತ್ತು ಒಂದೇ ಕಡೆ ಕುಳಿತು ಓದುವ ಶಿಸ್ತು ಇನ್ನಷ್ಟು ಬೆಳೆಯಬೇಕಿದ್ದು, ನಿಯಮಿತ ಪುನರಾವರ್ತನೆ ಹಾಗೂ ಸ್ವತಂತ್ರವಾಗಿ ಓದುವ ಅಭ್ಯಾಸ ಅಗತ್ಯವೆಂದು ವರದಿಯಲ್ಲಿಯೂ ಗಮನಿಸಲಾಗಿದೆ. 

ಪೋಷಕರು ಮತ್ತು ಶಿಕ್ಷಕರು ಏನು ಗಮನಿಸಬೇಕು?

ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಬಹಳ ಮುಖ್ಯ ವಿಷಯವೊಂದಿದೆ. ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳಲಾಗದ ಮಗು ಎಂದರೆ ನೆನಪಿನ ಶಕ್ತಿ ಕಡಿಮೆ ಇರುವ ಮಗು ಎಂದೇನೂ ಅಲ್ಲ. ಕೆಲವೊಮ್ಮೆ ನಾವು ಮಗುವಿಗೆ “ಇನ್ನೂ ಎರಡು ಸಲ ಓದು”, “ಮತ್ತೊಮ್ಮೆ ಕಂಠಪಾಠ ಮಾಡು” ಎಂದು ಹೇಳುತ್ತೇವೆ. ಆದರೆ ಅದೇ ವಿಧಾನದಲ್ಲಿ ಮತ್ತೆ ಮತ್ತೆ ಓದಿಸುವುದಕ್ಕಿಂತ “ಈ ವಿಷಯವನ್ನು ಈ ಮಗುವಿಗೆ ಇನ್ನೊಂದು ರೀತಿಯಲ್ಲಿ ಹೇಗೆ ಅರ್ಥಮಾಡಿಸಬಹುದು?” ಎಂದು ಯೋಚಿಸುವುದು ಹೆಚ್ಚು ಉಪಯುಕ್ತ.

ಮಗುವಿನ ಗಮನ ಸುಲಭವಾಗಿ ಬೇರೆಡೆಗೆ ಹರಿಯುತ್ತಿದ್ದರೆ ಅದನ್ನು ತಕ್ಷಣ ಅಶಿಸ್ತು ಅಥವಾ ಸೋಮಾರಿತನ ಎಂದು ಕರೆಯುವುದೂ ಸರಿಯಲ್ಲ. ಮೊದಲು ಅದರ ಓದುವ ವಾತಾವರಣವನ್ನು ಗಮನಿಸಬೇಕು. ದೂರದರ್ಶನ, ಮೊಬೈಲ್, ಮನೆಯವರ ಮಾತುಕತೆ ಅಥವಾ ನಿರಂತರ ಶಬ್ದಗಳ ನಡುವೆ ಮಗು ಓದುತ್ತಿದೆಯೇ? ಒಂದೇ ಸಲ ಬಹಳ ಹೊತ್ತು ಓದಲು ಒತ್ತಾಯಿಸಲಾಗುತ್ತಿದೆಯೇ? ಅರ್ಥವಾಗದ ವಿಷಯವನ್ನು ಪದೇಪದೇ ಕಂಠಪಾಠ ಮಾಡಲು ಪ್ರಯತ್ನಿಸುತ್ತಿದೆಯೇ? ಯಾರಾದರೂ ನೆನಪಿಸಿದಾಗ ಮಾತ್ರ ಓದಲು ಕುಳಿತುಕೊಳ್ಳುವ ಅಭ್ಯಾಸ ಬೆಳೆದಿದೆಯೇ? - ಇಂತಹ ಸಣ್ಣ ಸಂಗತಿಗಳೇ ಕೆಲವೊಮ್ಮೆ ಮಗುವಿನ ಕಲಿಕೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.

ಪರಿಹಾರ ದೊಡ್ಡದೇನಲ್ಲ…

ಮೊದಲು ಮಗುವಿಗೆ ಶಾಂತವಾದ, ಗಮನ ಚದುರದ ಓದುವ ವಾತಾವರಣವನ್ನು ಕಲ್ಪಿಸಬೇಕು. 

ದೀರ್ಘಕಾಲ ಕಂಠಪಾಠ ಮಾಡಿಸುವ ಬದಲು ಚಿಕ್ಕ ಅವಧಿಗಳಲ್ಲಿ ಅರ್ಥಮಾಡಿಕೊಳ್ಳುವುದು → ಪುಸ್ತಕ ಮುಚ್ಚಿ ನೆನಪಿಸಿಕೊಳ್ಳುವುದು → ತನ್ನದೇ ಮಾತಿನಲ್ಲಿ ಹೇಳುವುದು → ಚಿಕ್ಕ ಉತ್ತರ ಬರೆದು ನೋಡುವುದು ಎಂಬ ಸರಳ ಕ್ರಮವನ್ನು ರೂಢಿಸಬಹುದು.

ಚಿತ್ರಗಳು, ವಿಷಯ ನಕ್ಷೆಗಳು, ಘಟನೆಗಳ ಕಾಲಾನುಕ್ರಮ, ಮುಖ್ಯ ಪದಗಳು ಮತ್ತು ದಿನನಿತ್ಯದ ಸರಳ ಉದಾಹರಣೆಗಳನ್ನು ಬಳಸಿಕೊಂಡು ಪಾಠವನ್ನು ಅರ್ಥಮಾಡಿಸಬಹುದು. ಪ್ರತಿದಿನ ಸ್ವಲ್ಪ ಸಮಯವನ್ನು ಪುನರಾವರ್ತನೆಗೆ ಮೀಸಲಿಟ್ಟು, ಓದಿದ್ದನ್ನು ಬರೆಯುವ ಅಭ್ಯಾಸವನ್ನೂ ಮಾಡಿಸಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಮಗುವಿನ ಮೇಲೆ ಒತ್ತಡ ಹಾಕುವುದಕ್ಕಿಂತ, ಅದರ ಸಣ್ಣ ಪ್ರಗತಿಯನ್ನೂ ಗುರುತಿಸಿ ಪ್ರೋತ್ಸಾಹಿಸಬೇಕು. ಶಾಂತವಾದ ಓದುವ ವಾತಾವರಣ, ಚಿಕ್ಕ ಅವಧಿಯ ಪರಿಕಲ್ಪನಾ ಆಧಾರಿತ ಪುನರಾವರ್ತನೆ ಹಾಗೂ ಒತ್ತಡವಿಲ್ಲದ ನಿರಂತರ ಪ್ರೋತ್ಸಾಹ ನೀಡಬೇಕು.

ಮಕ್ಕಳಿಗೆ ನಾವು ಎಷ್ಟು ಗಂಟೆ ಓದಿಸಿದ್ದೇವೆ ಎನ್ನುವುದಕ್ಕಿಂತ, ಅವರು ಹೇಗೆ ಕಲಿಯುತ್ತಿದ್ದಾರೆ ಎಂಬುದನ್ನು ಅರಿಯುವುದು ಮುಖ್ಯ. ಏಕೆಂದರೆ ಕೆಲವೊಮ್ಮೆ ಸಮಸ್ಯೆ ಮಗುವಿನ ನೆನಪಿನ ಶಕ್ತಿಯಲ್ಲಿರುವುದಿಲ್ಲ…ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ನಾವು ಅದನ್ನು ಕಲಿಸದೇ ಇರುವುದರಲ್ಲಿ ಇರಬಹುದು.

ಆದ್ದರಿಂದ ಮಗುವಿಗೆ ಮತ್ತಷ್ಟು ಓದಲು ಹೇಳುವ ಮೊದಲು, “ಈ ಮಗು ಹೇಗೆ ಕಲಿಯುತ್ತದೆ?” ಎಂಬುದನ್ನು ಒಮ್ಮೆ ಅರಿತುಕೊಳ್ಳೋಣ. 
ಏಕೆಂದರೆ—
ಪ್ರತಿ ಮಗುವಿಗೂ ಕಲಿಯುವ ಸಾಮರ್ಥ್ಯವಿದೆ;
ಅದನ್ನು ಅರಳಿಸುವ ದಾರಿ ಮಾತ್ರ ಒಂದೇ ಆಗಿರುವುದಿಲ್ಲ.
ಸರಿಯಾದ ಕಲಿಕೆಯ ದಾರಿ ಸಿಕ್ಕಾಗ,
ಅದೇ ಸಾಮರ್ಥ್ಯ ಮಗುವಿನ ಆತ್ಮವಿಶ್ವಾಸವಾಗುತ್ತದೆ.

— ಅನುಭವದ ಪುಟಗಳಿಂದ,
ದೀಪಲಕ್ಷ್ಮಿ ಭಟ್, ಮಂಗಳೂರು

No comments:

Post a Comment

ಚೆನ್ನಾಗಿ ಓದುವ ಮಗುವಿಗೂ ಮಾರ್ಗದರ್ಶನ ಬೇಕೇ?

“ಅಮ್ಮಾ… ನಾನು ಓದಿದ್ದೆಲ್ಲ ನೆನಪಿಟ್ಟುಕೊಂಡಿದ್ದೇನೆ. ಆದರೆ ಈ ಪ್ರಶ್ನೆಗೆ ನನ್ನದೇ ಮಾತಿನಲ್ಲಿ ಹೇಗೆ ಉತ್ತರಿಸಬೇಕೆಂದು ಗೊತ್ತಾಗುತ್ತಿಲ್ಲ…” - ಕೆಲವೊಮ್ಮೆ ಮಕ್ಕಳ ಇಂತಹ...