Friday, 23 October 2026

ಚೆನ್ನಾಗಿ ಓದುವ ಮಗುವಿಗೂ ಮಾರ್ಗದರ್ಶನ ಬೇಕೇ?

“ಅಮ್ಮಾ… ನಾನು ಓದಿದ್ದೆಲ್ಲ ನೆನಪಿಟ್ಟುಕೊಂಡಿದ್ದೇನೆ. ಆದರೆ ಈ ಪ್ರಶ್ನೆಗೆ ನನ್ನದೇ ಮಾತಿನಲ್ಲಿ ಹೇಗೆ ಉತ್ತರಿಸಬೇಕೆಂದು ಗೊತ್ತಾಗುತ್ತಿಲ್ಲ…” - ಕೆಲವೊಮ್ಮೆ ಮಕ್ಕಳ ಇಂತಹ ಸಣ್ಣ ಮಾತುಗಳ ಹಿಂದೆ ನಾವು ಗಮನಿಸದ ದೊಡ್ಡ ಸಂಗತಿಯೊಂದು ಅಡಗಿರುತ್ತದೆ.

ಪುಸ್ತಕ ತೆರೆದರೆ ಓದುತ್ತಾರೆ. ಹೇಳಿಕೊಟ್ಟದ್ದನ್ನು ನೆನಪಿಟ್ಟುಕೊಳ್ಳುತ್ತಾರೆ. ಅಚ್ಚುಕಟ್ಟಾಗಿ ಬರೆಯುತ್ತಾರೆ. ಪರೀಕ್ಷೆಯಲ್ಲಿಯೂ ಉತ್ತಮ ಅಂಕಗಳನ್ನು ಪಡೆಯುವ ಸಾಮರ್ಥ್ಯ ಹೊಂದಿರುತ್ತಾರೆ. ಆದರೂ ಹೊಸದೊಂದು ಪ್ರಶ್ನೆ ಎದುರಾದಾಗ, ಸ್ವಂತವಾಗಿ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಅಥವಾ ಕಲಿತ ವಿಷಯವನ್ನು ವಿಭಿನ್ನ ರೀತಿಯಲ್ಲಿ ಬಳಸಬೇಕಾದಾಗ ಹಿಂಜರಿಯುತ್ತಾರೆ.

ಓದಿನಲ್ಲಿ ಇಷ್ಟೆಲ್ಲ ಆಸಕ್ತಿ ಇರುವ ಮಗುವಿಗೆ ಆತ್ಮವಿಶ್ವಾಸದ ಕೊರತೆ ಏಕೆ?

ಈ ಪ್ರಶ್ನೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ.

ಇತ್ತೀಚೆಗೆ ನಮ್ಮಲ್ಲಿ ಬಂದಿದ್ದ ಒಂದು ಮಗುವಿನ ಕಲಿಕಾ ಸಾಮರ್ಥ್ಯವನ್ನು ಗಮನಿಸಿದಾಗ ಆಸಕ್ತಿದಾಯಕ ಸಂಗತಿಯೊಂದು ತಿಳಿಯಿತು. - ಆಕೆ ಶಿಸ್ತಿನಿಂದ ಓದುವ, ಅಚ್ಚುಕಟ್ಟಾಗಿ ಬರೆಯುವ, ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿ. ಓದಿದ್ದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವೂ ಉತ್ತಮವಾಗಿತ್ತು. ಆದರೆ ವಿಷಯವನ್ನು ಆಳವಾಗಿ ವಿಶ್ಲೇಷಿಸುವುದು, ಕಲಿತದ್ದನ್ನು ಹೊಸ ಸಂದರ್ಭಗಳಿಗೆ ಅನ್ವಯಿಸುವುದು ಮತ್ತು ಕಷ್ಟ ಎದುರಾದಾಗ ಸ್ವತಂತ್ರವಾಗಿ ಮುಂದುವರಿಯುವುದರಲ್ಲಿ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿತ್ತು.

ಹಾಗಾದರೆ ಸಮಸ್ಯೆ ಎಲ್ಲಿತ್ತು?

ಆಕೆಯ ಕಲಿಕೆಯಲ್ಲಿ ಕಂಠಪಾಠಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ವಿಷಯವನ್ನು ಕ್ರಮಬದ್ಧವಾಗಿ ವಿವರಿಸಿದಾಗ ಚೆನ್ನಾಗಿ ಗ್ರಹಿಸುತ್ತಿದ್ದರೂ, ಸ್ವತಂತ್ರವಾಗಿ ಯೋಚಿಸಲು ಇನ್ನಷ್ಟು ಅವಕಾಶ ಬೇಕಿತ್ತು. ಕೆಲವೊಮ್ಮೆ ಸುತ್ತಮುತ್ತಲಿನ ಅಡಚಣೆಗಳಿಂದ ಗಮನವೂ ವಿಚಲಿತವಾಗುತ್ತಿತ್ತು.

ಇಲ್ಲಿ ಪೋಷಕರು ಮತ್ತು ಶಿಕ್ಷಕರು ಗಮನಿಸಬೇಕಾದ ಅಂಶವೊಂದಿದೆ.

ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಮಾತ್ರ ಕಲಿಕೆಯಲ್ಲ; ಅದನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಬಳಸುವುದೂ ಕಲಿಕೆಯೇ.

ಪೋಷಕರು ಮಕ್ಕಳಿಗೆ ಉತ್ತರಗಳನ್ನು ಹೇಳಿಕೊಡುವುದರ ಜೊತೆಗೆ “ನಿನಗೆ ಹೀಗೆ ಯಾಕೆ ಅನಿಸುತ್ತದೆ?”, “ಇದನ್ನು ಬೇರೆ ರೀತಿಯಲ್ಲಿ ಪರಿಹರಿಸಬಹುದೇ?” ಎಂಬ ಪ್ರಶ್ನೆಗಳನ್ನು ಕೇಳಬೇಕು.

ಶಿಕ್ಷಕರು ಮಕ್ಕಳಿಗೆ ಸ್ವತಂತ್ರವಾಗಿ ಉತ್ತರಿಸಲು ಅವಕಾಶ ನೀಡಿ, ತಪ್ಪುಗಳನ್ನು ಕಲಿಕೆಯ ಭಾಗವಾಗಿ ಸ್ವೀಕರಿಸಲು ಪ್ರೋತ್ಸಾಹಿಸಬೇಕು.

ಪರಿಹಾರ ಸರಳವಾಗಿದೆ.

ಪ್ರತಿದಿನ ಒಂದು ವಿಷಯವನ್ನು ಮಗುವಿನದೇ ಮಾತಿನಲ್ಲಿ ವಿವರಿಸಲು ಹೇಳಿ. ಸಣ್ಣ ಸಮಸ್ಯೆಗಳಿಗೆ ಸ್ವತಃ ಪರಿಹಾರ ಹುಡುಕಲು ಅವಕಾಶ ನೀಡಿ. ಓದಿನೊಂದಿಗೆ ಆಟ, ಕಲೆ ಮತ್ತು ಇತರ ಚಟುವಟಿಕೆಗಳಿಗೂ ಸಮಯ ಮೀಸಲಿಡಿ.

ಏಕೆಂದರೆ—

ಮಕ್ಕಳಿಗೆ ಎಲ್ಲ ಉತ್ತರಗಳನ್ನು ಕಲಿಸುವುದಕ್ಕಿಂತ,
ಉತ್ತರಗಳನ್ನು ಹುಡುಕುವ ಆತ್ಮವಿಶ್ವಾಸ ಬೆಳೆಸುವುದು ಮುಖ್ಯ.

ಉತ್ತಮ ಅಂಕಗಳು ಸಾಧನೆಯ ಒಂದು ಭಾಗವಾದರೆ, ಸ್ವತಂತ್ರ ಚಿಂತನೆ ವ್ಯಕ್ತಿತ್ವದ ನಿಜವಾದ ಬೆಳವಣಿಗೆ.

— ಅನುಭವದ ಪುಟಗಳಿಂದ,
ದೀಪಲಕ್ಷ್ಮಿ ಭಟ್, ಮಂಗಳೂರು

Thursday, 22 October 2026

ಹದಿಹರೆಯದ ಮನಸ್ಸು… ಅರಿಯಬೇಕಾದ ಭಾವನೆಗಳು!

ಹದಿಹರೆಯದಲ್ಲಿ ಮಕ್ಕಳ ಮನಸ್ಸು ಹೊಸ ಭಾವನೆಗಳು, ಆಕರ್ಷಣೆಗಳು ಮತ್ತು ಗೊಂದಲಗಳಿಗೆ ಒಳಗಾಗುವುದು ಸಹಜ. ಕೆಲವೊಮ್ಮೆ ಇಂತಹ ಭಾವನಾತ್ಮಕ ಬದಲಾವಣೆಗಳು ಅವರ ಓದು, ಏಕಾಗ್ರತೆ ಹಾಗೂ ದಿನಚರಿಯ ಮೇಲೂ ಪರಿಣಾಮ ಬೀರುತ್ತವೆ.

ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳನ್ನು ಅನುಮಾನದಿಂದ ಪ್ರಶ್ನಿಸುವುದಾಗಲಿ, ಗದರಿಸುವುದಾಗಲಿ ಮಾಡಬಾರದು. ಮಕ್ಕಳನ್ನು ಪ್ರಶ್ನೆಗಳಿಂದ ಮುಜುಗರಕ್ಕೀಡು ಮಾಡುವುದಕ್ಕಿಂತ, ಅವರ ಭಾವನೆಗಳನ್ನು ಗೌರವಿಸಿ, ವಿಶ್ವಾಸದಿಂದ ಮಾತನಾಡಿಸುವುದು ಮುಖ್ಯ.

ಮಕ್ಕಳಿಗೆ ತಮ್ಮ ಭಾವನೆಗಳನ್ನು ಬರವಣಿಗೆ, ಚಿತ್ರಕಲೆ ಅಥವಾ ಇಷ್ಟದ ಚಟುವಟಿಕೆಗಳ ಮೂಲಕ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಓದಿಗೆ ನಿಗದಿತ ಸಮಯ, ಮಧ್ಯೆ ಸಣ್ಣ ವಿರಾಮ ಹಾಗೂ ಸಾಧಿಸಬಹುದಾದ ಗುರಿಗಳನ್ನು ರೂಪಿಸಿಕೊಡಬೇಕು.

ಪೋಷಕರು ಅಂಕಗಳಿಗಿಂತ ಮಕ್ಕಳ ಪ್ರಯತ್ನವನ್ನು ಗುರುತಿಸಬೇಕು. ಶಿಕ್ಷಕರು ಅವರ ವರ್ತನೆಯ ಹಿಂದಿರುವ ಕಾರಣವನ್ನು ಅರಿಯಲು ಪ್ರಯತ್ನಿಸಬೇಕು.

• ಪ್ರತಿದಿನ ಕನಿಷ್ಠ 15 ನಿಮಿಷ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ.

• ಅವರ ಮಾತನ್ನು ಮಧ್ಯೆ ತಡೆಯದೆ, ಟೀಕಿಸದೆ ಆಲಿಸಿ.

• ಅವರ ಖಾಸಗಿತನವನ್ನು ಗೌರವಿಸಿ, ಅನಗತ್ಯ ವಿಚಾರಣೆ ಮಾಡಬೇಡಿ.

• ಓದು, ವಿಶ್ರಾಂತಿ ಮತ್ತು ಹವ್ಯಾಸಗಳಿಗೆ ಸಮತೋಲಿತ ದಿನಚರಿ ರೂಪಿಸಿ.

• ಅಂಕಗಳಿಗಿಂತ ಪ್ರಯತ್ನವನ್ನು ಪ್ರೋತ್ಸಾಹಿಸಿ.

• ವರ್ತನೆಯಲ್ಲಿ ನಿರಂತರ ಬದಲಾವಣೆ ಕಂಡರೆ ಸೂಕ್ತ ಸಮಾಲೋಚಕರ ನೆರವು ಪಡೆಯಿರಿ.

ನೆನಪಿರಲಿ, ಹದಿಹರೆಯದ ಮಕ್ಕಳಿಗೆ ಬೇಕಿರುವುದು ಕಠಿಣ ನಿಯಂತ್ರಣವಲ್ಲ; ಪ್ರೀತಿಯ ಮಾರ್ಗದರ್ಶನ ಮತ್ತು ನಂಬಿಕೆಯ ಆಸರೆ. ಮನಸ್ಸನ್ನು ಅರ್ಥಮಾಡಿಕೊಂಡಾಗಲೇ ಕಲಿಕೆಯ ಹಾದಿಯೂ ಸುಗಮವಾಗುತ್ತದೆ. ಹಾಗಿದ್ದರೆ ಮಾತ್ರ ಅವರ ಭವಿಷ್ಯವನ್ನು ಸುಂದರವಾಗಿ ರೂಪಿಸಲು ಸಾಧ್ಯ.

— ಅನುಭವದ ಪುಟಗಳಿಂದ,
ದೀಪಲಕ್ಷ್ಮಿ ಭಟ್, ಮಂಗಳೂರು

 

Wednesday, 30 September 2026

ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ… ತಪ್ಪು ಮಗುವಿನಲ್ಲೇ ಇದೆಯೇ?

“ಎಷ್ಟು ಸಲ ಓದಿದರೂ ಸ್ವಲ್ಪ ಹೊತ್ತಿನ ನಂತರ ಮರೆತು ಹೋಗುತ್ತಾನೆ…”
“ಪಾಠವನ್ನು ಕೇಳಿದರೆ ಹೇಳುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ಅದೇ ಪ್ರಶ್ನೆ ಕೇಳಿದರೆ ಉತ್ತರಿಸಲು ಕಷ್ಟಪಡುತ್ತಾನೆ…”
“ಓದಲು ಕುಳಿತಾಗ ಸಣ್ಣ ಶಬ್ದವಾದರೂ ಗಮನ ಅಲ್ಲಿಗೆ ಹೋಗುತ್ತದೆ. ಮತ್ತೆ ಪುಸ್ತಕದ ಕಡೆಗೆ ಬರಲು ಸಮಯ ಬೇಕಾಗುತ್ತದೆ…”
- ಮಕ್ಕಳ ಓದಿನ ಬಗ್ಗೆ ಮಾತನಾಡುವಾಗ ಕೆಲವು ಪೋಷಕರಿಂದ ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತೇವೆ.

ಇತ್ತೀಚೆಗೆ ನಮ್ಮಲ್ಲಿ ಬಂದಿದ್ದ ಒಂದು ಮಗುವಿನ ಸಮಸ್ಯೆಯೂ ಇದೇ ರೀತಿಯದ್ದಾಗಿತ್ತು. ವಿಶೇಷವಾಗಿ ಸಮಾಜ ವಿಜ್ಞಾನದಂತಹ ವಿಷಯಗಳನ್ನು ಓದುವಾಗ ಹೆಚ್ಚು ಕಷ್ಟವಾಗುತ್ತಿತ್ತು. ಪಾಠವನ್ನು ಅರ್ಥಮಾಡಿಕೊಂಡು ತನ್ನದೇ ಮಾತಿನಲ್ಲಿ ಹೇಳಿಕೊಳ್ಳುವುದಕ್ಕಿಂತ, ಪುಸ್ತಕದಲ್ಲಿರುವುದನ್ನು ಹಾಗೆಯೇ ಕಂಠಪಾಠ ಮಾಡುವ ಅಭ್ಯಾಸ ಹೆಚ್ಚಾಗಿತ್ತು. ಓದಲು ಕುಳಿತಾಗ ಸುತ್ತಮುತ್ತಲಿನ ಶಬ್ದಗಳಿಂದ ಬೇಗ ಗಮನ ಬೇರೆಡೆಗೆ ಹರಿಯುತ್ತಿತ್ತು. ಮಧ್ಯದಲ್ಲಿ ಯಾರಾದರೂ ಮಾತನಾಡಿಸಿದರೆ ಅಥವಾ ಬೇರೆ ಕಾರಣದಿಂದ ಓದಿಗೆ     ಅಡ್ಡಿಯಾದರೆ, ಮತ್ತೆ ಹಿಂದಿನ ವಿಷಯದೊಂದಿಗೆ ಸಂಪರ್ಕ ಸಾಧಿಸಿ ಓದನ್ನು ಮುಂದುವರಿಸುವುದು ಕಷ್ಟವಾಗುತ್ತಿತ್ತು.

ಮೊದಲ ನೋಟಕ್ಕೆ ಇದನ್ನು ಕಂಡಾಗ “ಓದಿನಲ್ಲಿ ಆಸಕ್ತಿ ಕಡಿಮೆ”, “ಏಕಾಗ್ರತೆ ಇಲ್ಲ”, “ಓದಿದ್ದು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ” ಎಂದು ಹೇಳುವುದು ಸುಲಭ. ಆದರೆ ಮಗುವಿನೊಂದಿಗೆ ಸ್ವಲ್ಪ ಸಮಯ ಮಾತನಾಡಿ, ಅದರ ಬರವಣಿಗೆ, ಚಿತ್ರಕಲೆ, ಕಲಿಕೆಯ ರೀತಿ ಮತ್ತು ಪ್ರತಿಕ್ರಿಯೆಯನ್ನು ಗಮನಿಸಿದಾಗ ಬೇರೆಯದೇ ಚಿತ್ರ ಕಾಣಿಸಿತು. ಮಗು ಶಾಂತ ಸ್ವಭಾವದ್ದಾಗಿತ್ತು. ಹೇಳಿದ್ದನ್ನು ಗಮನವಿಟ್ಟು ಕೇಳುವ ಮತ್ತು ಮಾರ್ಗದರ್ಶನವನ್ನು ಸ್ವೀಕರಿಸುವ ಗುಣವೂ ಇತ್ತು. ವಿಷಯಗಳನ್ನು ಸರಳವಾಗಿ, ಕ್ರಮಬದ್ಧವಾಗಿ, ಚಿತ್ರಗಳ ಮೂಲಕ ಅಥವಾ ದಿನನಿತ್ಯದ ಉದಾಹರಣೆಗಳೊಂದಿಗೆ ವಿವರಿಸಿದಾಗ ಚೆನ್ನಾಗಿ ಸ್ಪಂದಿಸುತ್ತಿತ್ತು.

ಅಂದರೆ ಕಲಿಯುವ ಸಾಮರ್ಥ್ಯದ ಕೊರತೆ ಇರಲಿಲ್ಲ; ಕಲಿಯಲು ಬಳಸುತ್ತಿದ್ದ ವಿಧಾನವೇ ಆ ಮಗುವಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿರಲಿಲ್ಲ.

ಮಗುವಿನ ಕಲಿಕೆಯ ವಿಧಾನವನ್ನು ಗಮನಿಸಿದಾಗ, ಅದು ಕಂಠಪಾಠದ ಮೇಲೆ ಹೆಚ್ಚು ಅವಲಂಬಿತವಾಗಿದ್ದರೂ, ಚಿತ್ರಗಳು, ದೃಶ್ಯಗಳು ಹಾಗೂ ಸರಳ ಪ್ರಾಯೋಗಿಕ ಉದಾಹರಣೆಗಳ ಮೂಲಕ ವಿವರಿಸಿದಾಗ ವಿಷಯವನ್ನು ಹೆಚ್ಚು ಚೆನ್ನಾಗಿ ಗ್ರಹಿಸುವುದು ಕಂಡುಬಂತು

ಹಾಗಾದರೆ ಸಮಸ್ಯೆ ಎಲ್ಲಿತ್ತು?

ಒಂದು ವಿಷಯವನ್ನು ಹತ್ತು ಬಾರಿ ಓದುವುದು ಮತ್ತು ಅದನ್ನು ಅರ್ಥಮಾಡಿಕೊಂಡು ಕಲಿಯುವುದು ಒಂದೇ ಅಲ್ಲ.

ಉದಾಹರಣೆಗೆ, ಇತಿಹಾಸದ ಒಂದು ಪಾಠವನ್ನು ಸಾಲುಸಾಲಾಗಿ ಕಂಠಪಾಠ ಮಾಡುವ ಬದಲು ಘಟನೆಗಳನ್ನು “ಮೊದಲು ಏನಾಯಿತು? ನಂತರ ಏನಾಯಿತು? ಅದಕ್ಕೆ ಕಾರಣವೇನು? ಅದರ ಪರಿಣಾಮವೇನು?” ಎಂದು ಒಂದಕ್ಕೊಂದು ಜೋಡಿಸಿ ಕಥೆಯಂತೆ ಅರ್ಥಮಾಡಿಕೊಂಡರೆ ನೆನಪಿನಲ್ಲಿ ಉಳಿಸಿಕೊಳ್ಳುವುದು ಸುಲಭವಾಗಬಹುದು.

ಭೂಗೋಳದ ವಿಷಯವಾದರೆ ನಕ್ಷೆ, ಚಿತ್ರ ಅಥವಾ ಸರಳ ಕೋಷ್ಟಕಗಳ ಸಹಾಯ ಪಡೆಯಬಹುದು. ದೊಡ್ಡ ಉತ್ತರವನ್ನು ಒಂದೇ ಸಲ ಕಂಠಪಾಠ ಮಾಡುವ ಬದಲು, ಅದರಲ್ಲಿರುವ ಮುಖ್ಯ ಪದಗಳನ್ನು ಗುರುತಿಸಿ, ಅವುಗಳ ಆಧಾರದಲ್ಲಿ ತನ್ನದೇ ಮಾತಿನಲ್ಲಿ ಉತ್ತರವನ್ನು ಕಟ್ಟುವ ಅಭ್ಯಾಸ ಮಾಡಿಸಬಹುದು.

ಈ ಮಗುವಿನ ವಿಷಯದಲ್ಲಿ ಇನ್ನೊಂದು ಮುಖ್ಯ ಅಂಶವೂ ಕಂಡುಬಂದಿತ್ತು — ಓದಿನ ನಿರಂತರತೆ.

ಓದಲು ಕುಳಿತ ನಂತರ ಸುತ್ತಮುತ್ತಲಿನ ಶಬ್ದದಿಂದ ಗಮನ ಬೇರೆಡೆ ಹೋದಾಗ ಕಲಿಕೆಯ ಸರಪಳಿ ತುಂಡಾಗುತ್ತಿತ್ತು. ಜೊತೆಗೆ ಯಾರಾದರೂ ಹೇಳಿದ ನಂತರವೇ ಓದಲು ಕುಳಿತುಕೊಳ್ಳುವುದಕ್ಕಿಂತ, ಸ್ವತಃ ಓದಲು ಆರಂಭಿಸುವ ಅಭ್ಯಾಸ ಹಾಗೂ ಕ್ರಮಬದ್ಧ ಪುನರಾವರ್ತನೆಯನ್ನೂ ಬೆಳೆಸಬೇಕಾಗಿತ್ತು. ಮಗುವಿನ ಗಮನ ಕೇಂದ್ರೀಕರಿಸುವಿಕೆ ಮತ್ತು ಒಂದೇ ಕಡೆ ಕುಳಿತು ಓದುವ ಶಿಸ್ತು ಇನ್ನಷ್ಟು ಬೆಳೆಯಬೇಕಿದ್ದು, ನಿಯಮಿತ ಪುನರಾವರ್ತನೆ ಹಾಗೂ ಸ್ವತಂತ್ರವಾಗಿ ಓದುವ ಅಭ್ಯಾಸ ಅಗತ್ಯವೆಂದು ವರದಿಯಲ್ಲಿಯೂ ಗಮನಿಸಲಾಗಿದೆ. 

ಪೋಷಕರು ಮತ್ತು ಶಿಕ್ಷಕರು ಏನು ಗಮನಿಸಬೇಕು?

ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಬಹಳ ಮುಖ್ಯ ವಿಷಯವೊಂದಿದೆ. ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳಲಾಗದ ಮಗು ಎಂದರೆ ನೆನಪಿನ ಶಕ್ತಿ ಕಡಿಮೆ ಇರುವ ಮಗು ಎಂದೇನೂ ಅಲ್ಲ. ಕೆಲವೊಮ್ಮೆ ನಾವು ಮಗುವಿಗೆ “ಇನ್ನೂ ಎರಡು ಸಲ ಓದು”, “ಮತ್ತೊಮ್ಮೆ ಕಂಠಪಾಠ ಮಾಡು” ಎಂದು ಹೇಳುತ್ತೇವೆ. ಆದರೆ ಅದೇ ವಿಧಾನದಲ್ಲಿ ಮತ್ತೆ ಮತ್ತೆ ಓದಿಸುವುದಕ್ಕಿಂತ “ಈ ವಿಷಯವನ್ನು ಈ ಮಗುವಿಗೆ ಇನ್ನೊಂದು ರೀತಿಯಲ್ಲಿ ಹೇಗೆ ಅರ್ಥಮಾಡಿಸಬಹುದು?” ಎಂದು ಯೋಚಿಸುವುದು ಹೆಚ್ಚು ಉಪಯುಕ್ತ.

ಮಗುವಿನ ಗಮನ ಸುಲಭವಾಗಿ ಬೇರೆಡೆಗೆ ಹರಿಯುತ್ತಿದ್ದರೆ ಅದನ್ನು ತಕ್ಷಣ ಅಶಿಸ್ತು ಅಥವಾ ಸೋಮಾರಿತನ ಎಂದು ಕರೆಯುವುದೂ ಸರಿಯಲ್ಲ. ಮೊದಲು ಅದರ ಓದುವ ವಾತಾವರಣವನ್ನು ಗಮನಿಸಬೇಕು. ದೂರದರ್ಶನ, ಮೊಬೈಲ್, ಮನೆಯವರ ಮಾತುಕತೆ ಅಥವಾ ನಿರಂತರ ಶಬ್ದಗಳ ನಡುವೆ ಮಗು ಓದುತ್ತಿದೆಯೇ? ಒಂದೇ ಸಲ ಬಹಳ ಹೊತ್ತು ಓದಲು ಒತ್ತಾಯಿಸಲಾಗುತ್ತಿದೆಯೇ? ಅರ್ಥವಾಗದ ವಿಷಯವನ್ನು ಪದೇಪದೇ ಕಂಠಪಾಠ ಮಾಡಲು ಪ್ರಯತ್ನಿಸುತ್ತಿದೆಯೇ? ಯಾರಾದರೂ ನೆನಪಿಸಿದಾಗ ಮಾತ್ರ ಓದಲು ಕುಳಿತುಕೊಳ್ಳುವ ಅಭ್ಯಾಸ ಬೆಳೆದಿದೆಯೇ? - ಇಂತಹ ಸಣ್ಣ ಸಂಗತಿಗಳೇ ಕೆಲವೊಮ್ಮೆ ಮಗುವಿನ ಕಲಿಕೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.

ಪರಿಹಾರ ದೊಡ್ಡದೇನಲ್ಲ…

ಮೊದಲು ಮಗುವಿಗೆ ಶಾಂತವಾದ, ಗಮನ ಚದುರದ ಓದುವ ವಾತಾವರಣವನ್ನು ಕಲ್ಪಿಸಬೇಕು. 

ದೀರ್ಘಕಾಲ ಕಂಠಪಾಠ ಮಾಡಿಸುವ ಬದಲು ಚಿಕ್ಕ ಅವಧಿಗಳಲ್ಲಿ ಅರ್ಥಮಾಡಿಕೊಳ್ಳುವುದು → ಪುಸ್ತಕ ಮುಚ್ಚಿ ನೆನಪಿಸಿಕೊಳ್ಳುವುದು → ತನ್ನದೇ ಮಾತಿನಲ್ಲಿ ಹೇಳುವುದು → ಚಿಕ್ಕ ಉತ್ತರ ಬರೆದು ನೋಡುವುದು ಎಂಬ ಸರಳ ಕ್ರಮವನ್ನು ರೂಢಿಸಬಹುದು.

ಚಿತ್ರಗಳು, ವಿಷಯ ನಕ್ಷೆಗಳು, ಘಟನೆಗಳ ಕಾಲಾನುಕ್ರಮ, ಮುಖ್ಯ ಪದಗಳು ಮತ್ತು ದಿನನಿತ್ಯದ ಸರಳ ಉದಾಹರಣೆಗಳನ್ನು ಬಳಸಿಕೊಂಡು ಪಾಠವನ್ನು ಅರ್ಥಮಾಡಿಸಬಹುದು. ಪ್ರತಿದಿನ ಸ್ವಲ್ಪ ಸಮಯವನ್ನು ಪುನರಾವರ್ತನೆಗೆ ಮೀಸಲಿಟ್ಟು, ಓದಿದ್ದನ್ನು ಬರೆಯುವ ಅಭ್ಯಾಸವನ್ನೂ ಮಾಡಿಸಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಮಗುವಿನ ಮೇಲೆ ಒತ್ತಡ ಹಾಕುವುದಕ್ಕಿಂತ, ಅದರ ಸಣ್ಣ ಪ್ರಗತಿಯನ್ನೂ ಗುರುತಿಸಿ ಪ್ರೋತ್ಸಾಹಿಸಬೇಕು. ಶಾಂತವಾದ ಓದುವ ವಾತಾವರಣ, ಚಿಕ್ಕ ಅವಧಿಯ ಪರಿಕಲ್ಪನಾ ಆಧಾರಿತ ಪುನರಾವರ್ತನೆ ಹಾಗೂ ಒತ್ತಡವಿಲ್ಲದ ನಿರಂತರ ಪ್ರೋತ್ಸಾಹ ನೀಡಬೇಕು.

ಮಕ್ಕಳಿಗೆ ನಾವು ಎಷ್ಟು ಗಂಟೆ ಓದಿಸಿದ್ದೇವೆ ಎನ್ನುವುದಕ್ಕಿಂತ, ಅವರು ಹೇಗೆ ಕಲಿಯುತ್ತಿದ್ದಾರೆ ಎಂಬುದನ್ನು ಅರಿಯುವುದು ಮುಖ್ಯ. ಏಕೆಂದರೆ ಕೆಲವೊಮ್ಮೆ ಸಮಸ್ಯೆ ಮಗುವಿನ ನೆನಪಿನ ಶಕ್ತಿಯಲ್ಲಿರುವುದಿಲ್ಲ…ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ನಾವು ಅದನ್ನು ಕಲಿಸದೇ ಇರುವುದರಲ್ಲಿ ಇರಬಹುದು.

ಆದ್ದರಿಂದ ಮಗುವಿಗೆ ಮತ್ತಷ್ಟು ಓದಲು ಹೇಳುವ ಮೊದಲು, “ಈ ಮಗು ಹೇಗೆ ಕಲಿಯುತ್ತದೆ?” ಎಂಬುದನ್ನು ಒಮ್ಮೆ ಅರಿತುಕೊಳ್ಳೋಣ. 
ಏಕೆಂದರೆ—
ಪ್ರತಿ ಮಗುವಿಗೂ ಕಲಿಯುವ ಸಾಮರ್ಥ್ಯವಿದೆ;
ಅದನ್ನು ಅರಳಿಸುವ ದಾರಿ ಮಾತ್ರ ಒಂದೇ ಆಗಿರುವುದಿಲ್ಲ.
ಸರಿಯಾದ ಕಲಿಕೆಯ ದಾರಿ ಸಿಕ್ಕಾಗ,
ಅದೇ ಸಾಮರ್ಥ್ಯ ಮಗುವಿನ ಆತ್ಮವಿಶ್ವಾಸವಾಗುತ್ತದೆ.

— ಅನುಭವದ ಪುಟಗಳಿಂದ,
ದೀಪಲಕ್ಷ್ಮಿ ಭಟ್, ಮಂಗಳೂರು

Tuesday, 22 September 2026

ಓದಿದ್ದು ನೆನಪಾಗುವುದಿಲ್ಲ… ಯಾಕೆ?

“ಮನೆಯಲ್ಲಿ ಎಲ್ಲವೂ ಗೊತ್ತಿರುತ್ತದೆ… ಪರೀಕ್ಷೆಯಲ್ಲಿ ಮಾತ್ರ ನೆನಪಾಗುವುದಿಲ್ಲ!”

ಇದು ಕೆಲವು ಮಕ್ಕಳ ಸಾಮಾನ್ಯ ಅಳಲು.

ಮಗುವಿನೊಂದಿಗೆ ಮಾತನಾಡಿ, ಬರವಣಿಗೆ, ಚಿತ್ರಕಲೆ ಹಾಗೂ ಕಲಿಕೆಯ ವಿಧಾನವನ್ನು ಗಮನಿಸಿದಾಗ ಅಚ್ಚರಿಯ ಸಂಗತಿಯೊಂದು ತಿಳಿಯಿತು. ಆಕೆಗೆ ಕಲಿಯುವ ಸಾಮರ್ಥ್ಯದ ಕೊರತೆ ಇರಲಿಲ್ಲ. ಬದಲಾಗಿ ವಿಷಯಗಳನ್ನು ಉದಾಹರಣೆ, ಚಿತ್ರ ಮತ್ತು ಪರಿಕಲ್ಪನೆಗಳ ಮೂಲಕ ಅರ್ಥಮಾಡಿಕೊಂಡಾಗ ಬಹಳ ಚೆನ್ನಾಗಿ ಗ್ರಹಿಸುತ್ತಿದ್ದಳು. ಸೃಜನಶೀಲತೆ, ಕಲ್ಪನಾಶಕ್ತಿ ಮತ್ತು ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯವೂ ಉತ್ತಮವಾಗಿತ್ತು  ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಉತ್ತರಿಸುತ್ತಿದ್ದಳು. ಕಲ್ಪನಾಶಕ್ತಿ, ಗ್ರಹಿಕೆ, ಅಭಿವ್ಯಕ್ತಿ—ಎಲ್ಲವೂ ಚೆನ್ನಾಗಿತ್ತು.

ಹಾಗಾದರೆ ಪರೀಕ್ಷೆಯಲ್ಲಿ ಯಾಕೆ ತೊಂದರೆ?

ಮಗುವಿನ ಕಲಿಕಾ ವಿಧಾನವನ್ನು ಗಮನಿಸಿದಾಗ ಸಮಸ್ಯೆ ಬುದ್ಧಿವಂತಿಕೆಯಲ್ಲ, ಓದುವ ಕ್ರಮದಲ್ಲಿದೆ ಎಂಬುದು ತಿಳಿಯಿತು. ಆ ಮಗುವಿಗೆ ಕೇವಲ ಓದಿ ಕಂಠಪಾಠ ಮಾಡುವುದಕ್ಕಿಂತ ಚಿತ್ರ, ಉದಾಹರಣೆ, ಪ್ರಾಯೋಗಿಕ ವಿವರಣೆಗಳ ಮೂಲಕ ವಿಷಯವನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಸಹಜವಾಗಿತ್ತು.  ಸಮಸ್ಯೆ ಓದುವುದರಲ್ಲಿ ಅಲ್ಲ; ಓದಿದ್ದನ್ನು ಸರಿಯಾದ ಕ್ರಮದಲ್ಲಿ ಪುನರಾವರ್ತಿಸುವುದರಲ್ಲಿ ಇತ್ತು. ಜೊತೆಗೆ ನಿಗದಿತ ಓದುವ ಸಮಯ, ಪುನರಾವರ್ತನೆ ಮತ್ತು ಪರೀಕ್ಷಾ ಬರವಣಿಗೆಯ ಅಭ್ಯಾಸದ ಕೊರತೆಯೂ ಇತ್ತು.

ಇಂತಹ ಮಕ್ಕಳು ಕಡಿಮೆ ಅಂಕ ಪಡೆದಾಗ “ಸರಿಯಾಗಿ ಓದುವುದಿಲ್ಲ”, “ನೆನಪೇ ಇರುವುದಿಲ್ಲ” ಎಂದು ತೀರ್ಮಾನಿಸುವ ಮೊದಲು ಪೋಷಕರು ಹಾಗೂ ಶಿಕ್ಷಕರು ಆ ಮಗು ಹೇಗೆ ಕಲಿಯುತ್ತದೆ? ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಪರಿಹಾರ ದೊಡ್ಡದೇನಲ್ಲ - ಮಗುವಿಗೆ ಹೊಂದುವ ಕಲಿಕಾ ವಿಧಾನ, ನಿಗದಿತ ದಿನಚರಿ, ಚಿಕ್ಕಚಿಕ್ಕ ಪುನರಾವರ್ತನೆ ಮತ್ತು ನಿಯಮಿತ ಬರವಣಿಗೆಯ ಅಭ್ಯಾಸ.  

ಏಕೆಂದರೆ ಕೆಲವೊಮ್ಮೆ ಮಗುವಿನ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿಲ್ಲ…
ಆ ಸಾಮರ್ಥ್ಯ ಹೊರಬರುವ ಸರಿಯಾದ ದಾರಿಯನ್ನು ತೋರಿಸಿದರೆ ಸಾಕು.
  

ಪ್ರತಿ ಮಗುವಿಗೂ ಕಲಿಯುವ ಸಾಮರ್ಥ್ಯವಿದೆ;
ಅದನ್ನು ಅರಳಿಸುವ ದಾರಿ ಮಾತ್ರ ಒಂದೇ ಆಗಿರುವುದಿಲ್ಲ. 

— ಅನುಭವದ ಪುಟಗಳಿಂದ,
ದೀಪಲಕ್ಷ್ಮಿ ಭಟ್, ಮಂಗಳೂರು

ಚೆನ್ನಾಗಿ ಓದುವ ಮಗುವಿಗೂ ಮಾರ್ಗದರ್ಶನ ಬೇಕೇ?

“ಅಮ್ಮಾ… ನಾನು ಓದಿದ್ದೆಲ್ಲ ನೆನಪಿಟ್ಟುಕೊಂಡಿದ್ದೇನೆ. ಆದರೆ ಈ ಪ್ರಶ್ನೆಗೆ ನನ್ನದೇ ಮಾತಿನಲ್ಲಿ ಹೇಗೆ ಉತ್ತರಿಸಬೇಕೆಂದು ಗೊತ್ತಾಗುತ್ತಿಲ್ಲ…” - ಕೆಲವೊಮ್ಮೆ ಮಕ್ಕಳ ಇಂತಹ...